ರಾಣೆಬೇನ್ನೂರು : ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠದ ಧರ್ಮದರ್ಶಿಯಾಗಿ ಸುಮಾರು 2 ವರ್ಷಗಳಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಕೆಲವರು ನನ್ನ ವಿರುದ್ದ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಧರ್ಮದರ್ಶಿ ಸಿದ್ದನಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನನ್ನ ತೇಜೊವಧೆ ಮಾಡುವ ದುರುದ್ದೇಶದಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿಲ್ಲ ಎಂದರು.
ಮಠದ ಪರವಾಗಿ ಯಾವುದೇ ದೇಣಿಗೆಯನ್ನು ಆನ್‍ಲೈನ್ ಮೂಲಕ ನನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿಲ್ಲ. ಆರೋಪ ಮಾಡುವವರು ತಿಳಿಸಿರುವ ದಿನಾಂಕದಂದು ನನ್ನ ಮೊಬೈಲ್ ಖಾತೆಗೆ ಬಂದಿರುವ ಹಣ ಸ್ವಂತ ವಹಿವಾಟಿನ ವಿಚಾರವಾಗಿದ್ದು ಮಠಕ್ಕೆ ದೇಣಿಗೆ ಸಲ್ಲಿಸಿರುವುದಲ್ಲ. ನನ್ನ ಮೇಲೆ ದುರುದ್ದೇಶದಿಂದ ಹಣಕಾಸಿನ ದುರುಪಯೋಗದ ಆರೋಪ ಹೊರೆಸುವ ಹುನ್ನಾರ ಮೇಲ್ನೊಟಕ್ಕೆ ಗೊತ್ತಾಗುತ್ತಿದೆ. ನಾನು ಧರ್ಮದರ್ಶಿಯಾಗದೇ ಇರುವ ಸಮಯದಲ್ಲಿನ ವಹಿವಾಟಿನ ದಾಖಲೆ ಲಗತ್ತಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ನನ್ನ ಮೇಲೆ ಮಾಡಿರುವ ಆರೋಪಗಳ ಕುರಿತು ಮಠದ ಆಡಳಿತಾಧಿಕಾರಿಗಳು ಹಾಗೂ ನ್ಯಾಯಾಧೀಶರ ಬಳಿ ಅಫಿಡೆವಿಟ್ ಸಲ್ಲಿಸಲು ಹೇಳಿ ಒಂದು ತಿಂಗಳು ಕಳೆದರೂ ಇನ್ನೂ ಯಾರು ಅಫಡೆವಿಟ್ ಸಲ್ಲಿಸಿಲ್ಲ. ದಾಖಲೆ ಇದ್ದರೆ ಸಲ್ಲಿಸಲಿ. ಹಾಗೊಂದು ವೇಳೆ ಅಫಿಡೆವಿಟ್ ಸಲ್ಲಿಸದೇ ಹೋದರೆ ಇವರ ವಿರುದ್ದ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದರು.
ಫೆ.10ರಂದು ರಾಣಿಬೆನ್ನೂರು ನಗರಕ್ಕೆ ಜ್ಯೋತಿಯಾತ್ರೆ ಆಗಮಿಸಿದ ಸಮಯದಲ್ಲಿ ರಥಯಾತ್ರೆಯ ಸೇವಕರು ಹಾಗೂ ಭಕ್ತರ ಮೇಲೆ ನಾನು, ನನ್ನ ಸಂಗಡಿಗರು ಸೇರಿ ಹಲ್ಲೆ ಮಾಡಿದ್ದಾರೆ ಎಂಬುದು ಸಹ ಸುಳ್ಳಿನ ಸಂಗತಿಯಾಗಿದೆ ಎಂದರು.
ಸಮಾಜದಲ್ಲಿ ನನ್ನ ಏಳಿಗೆ ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿ ಸೇರಿಕೊಂಡು ತೇಜೋವದೆ ಮಾಡಿ ನಾನು ತಲೆತೆಗ್ಗಿಸುವಂತೆ ಮಾಡುವ ಹುನ್ನಾರ ಅಡಗಿದೆ. ಒಂದು ವೇಳೆ ನನ್ನ ವಿರುದ್ದ ಆರೋಪಗಳ ಕುರಿತು ಮಠದ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶರು ವಿಚಾರಣೆ ನಡೆಸಿದರೆ ಅದಕ್ಕೂ ಸಿದ್ದನಿದ್ದೇನೆ ಎಂದರು.
ಬಸವರಾಜ ಕುರವತ್ತಿ, ಶಂಬಣ್ಣ ಮಾಲದಾರ, ವಿಶ್ವನಾಥ ಕೂನಬೇವು, ಮಂಜುನಾಥ ಮಲ್ಲಾಪುರ, ಈಶಪ್ಪ ಮುದ್ದಿ, ವಿಶ್ವನಾಥ ಚನ್ನಪ್ಪನವರ ಸುದ್ದಿಗೋಷ್ಠಿಯಲ್ಲಿದ್ದರು.
More Stories
ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಐದು ದಿನಗಳ ಕಾಲ ಹಲಸು-ಮಾವು ಮೇಳ.
ಹಾವೇರಿ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ, ಯಾರು ಅವರು!
ರಾಣೆಬೆನ್ನೂರ ನಗರದಲ್ಲಿ ನಕಲಿ ರಸಗೊಬ್ಬರ ಪತ್ತೆ, ವಶಪಡಿಸಿಕೊಂಡ ಕೃಷಿ ಅಧಿಕಾರಿಗಳು.