ರಾಣೆಬೆನ್ನೂರ:ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನ ಸಮಿತಿಗೆ ಹೊಸ ಆಡಳಿತ ಮಂಡಳಿ ರಚಿಸುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈಗಿರುವ ಆಡಳಿತ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ರದ್ದುಗೊಳಿಸಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ಆದೇಶ ಹೊರಡಿಸಿದೆ.
ಶ್ರೀ ಮಾಲತೇಶ ದೇವಸ್ಥಾನ ಸಮಿತಿ ಹಳೇ ಸಮಿತಿ ಕಳೆದ 25 ವರ್ಷಗಳಿಂದ ಬದಲಾಗಿಲ್ಲ. ಆದ್ದರಿಂದ ಹಳೇ ಸಮಿತಿಯ ಅವಧಿ ಮುಗಿದಿದ್ದು ಹೊಸ ಸಮಿತಿ ಆಯ್ಕೆ ಮಾಡಬೇಕು ಎಂದು ಗ್ರಾಮಸ್ಥರು, ದೇವಸ್ಥಾನದ ಬಾಬುದಾರರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ನ್ಯಾಯಾಲಯ ಹೊಸ ಸಮಿತಿ ರಚನೆಗೆ ಜೂ. 26 ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಳೇ ಸಮಿತಿಯವರು ಹೊಸ ಸಮಿತಿ ರಚನೆ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಜು. 1ರಂದು ಧಾರವಾಡ ಹೈಕೋರ್ಟ್ ನ ಏಕ ಸದಸ್ಯ ಪೀಠದ ಮೊರೆ ಹೋಗಿದ್ದರು.
ಇದರ ಬೆನ್ನಲ್ಲೆ ದೇವರಗುಡ್ಡದ ಗ್ರಾಮಸ್ಥರು, ಬಾಬುದಾರರ ಪರವಾಗಿ ಹಿರಿಯ ವಕೀಲ ಶರಣು ಅಂಗಡಿ ಹೊಸ ಸಮಿತಿಗೆ ತಡೆಯಾಜ್ಞೆ ನೀಡಬಾರದು. ಜತೆಗೆ ಈ ಪ್ರಕರಣ ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆಗ ಧಾರವಾಡ ಹೈಕೋರ್ಟ್ ನ ಏಕ ಸದಸ್ಯ ಪೀಠ ತಡೆಯಾಜ್ಞೆ ರದ್ದುಗೊಳಿಸಿತ್ತು.
ಇದರಿಂದಾಗಿ ಹಳೇ ಸಮಿತಿಯವರು ಮತ್ತೇ ಜು. 24ರಂದು ಧಾರವಾಡ ಹೈಕೋರ್ಟ್ ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ ಹಳೇ ಸಮಿತಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಹೈಕೋರ್ಟ್ ನ ವಿಭಾಗೀಯ ಪೀಠ ತಡೆಯಾಜ್ಞೆ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ತಹಸೀಲ್ದಾರ್ ಸುಪರ್ದಿಗೆ ನೀಡಬೇಕು ಎಂದು ಧಾರವಾಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಆರ್.ಎಚ್. ಭಾಗವಾನ ದೇವಸ್ಥಾನಕ್ಕೆ ಭೇಟಿ ನೀಡಿ ಆಡಳಿತ ಕಚೇರಿಯಲ್ಲಿ ಪ್ರಭಾರ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.